ಕಾವ್ಯಹೇತು

ಕಾವ್ಯದ ಉತ್ಪತ್ತಿಗೆ ಮೂಲಭೂತವಾದ ಕಾರಣ. ಇದು ಅಪೂರ್ವ ವಸ್ತುರಚನಾ ಕ್ರಮವಾದ ಶಕ್ತಿ ಅಥವಾ ಪ್ರತಿಭೆ. ಪ್ರತಿಭೆ, ವ್ಯುತ್ಪತ್ತಿ ಮತ್ತು ಅಭ್ಯಾಸಗಳೂ ಕಾವ್ಯಹೇತುಗಳೆಂದು ಸಾಮನ್ಯವಾಗಿ ಎಲ್ಲ ಆಲಂಕಾರಿಕರ ಮತ.

ನೈಸರ್ಗಿಕವಾದ ಪ್ರತಿಭೆ, ನಿರ್ಮಲಶ್ರುತಿ ಎಂದರೆ ವೇದ ಮತ್ತು ಶಾಸ್ತ್ರಾದಿಗಳ ಪರಿಚಯದಿಂದ ಉಂಟಾದ ವ್ಯುತ್ಪತ್ತಿ, ಮತ್ತು ಅಮಂದಾಭಿಯೋಗ (ಸತತ ಅಭ್ಯಾಸ) -ಇವು ಮೂರೂ ಕಾವ್ಯಸಂಪತ್ತಿಗೆ ಕಾರಣವೆಂದು ದಂಡಿಯ ಅಭಿಪ್ರಾಯ.

ಪ್ರತಿಭಾವಂತನಿಂದ ಕಾವ್ಯದ ಉತ್ವತ್ತಿಯಾಗುತ್ತದೆ. ಶಬ್ದಾಭಿಧೇಯಜ್ಞರ ಶುಶ್ರೂಷೆಮಾಡಿ ಶಬ್ದಾರ್ಥಗಳನ್ನು ತಿಳಿದುಕೊಂಡು, ಇತರ ಕಾವ್ಯಪ್ರಬಂಧಗಳನ್ನು ಅಭ್ಯಸಿಸಿ ಕಾವ್ಯಕ್ರಿಯೆಗೆ ಕೈ ಹಾಕಬೇಕು-ಎಂದು ದಂಡಿಯ ಸಮಕಾಲೀನ ಭಾಮಹ ಹೇಳುತ್ತಾನೆ.

ಇವರಾದ ಮೇಲೆ ಬಂದ ರುದ್ರಟನ ಅಭಿಪ್ರಾಯವೂ ಇದೇ. ಅಲಂಕಾರ ಗ್ರಂಥಗಳಲ್ಲೇ ಹೆಚ್ಚು ಹೆಸರುವಾಸಿಯಾದ ಕಾವ್ಯ ಪ್ರಕಾಶದ ಕರ್ತೃ ಮಮ್ಮಟ ಶಕ್ತಿ, ನಿಪುಣತೆ (ಲೋಕ, ಶಾಸ್ತ್ರ, ಕಾವ್ಯಾದಿಗಳ ವಿಶೇಷ ಪರಿಚಯ-ವ್ಯುತ್ಪತ್ತಿ), ಮತ್ತು ಅಭ್ಯಾಸ-ಇವು ಮೂರು ಸೇರಿ ಕಾವ್ಯಹೇತು ಎನಿಸುತ್ತವೆ.-ಎನ್ನುತ್ತಾನೆ.

ಬೃಹದ್‍ಗ್ರಂಥಗಳ ಲೇಖಕನಾದ ಹೇಮಚಂದ್ರಸೂರಿ ಕಾವ್ಯಕ್ಕೆ ಪ್ರತಿಭೆಯೇ ಕಾರಣ, ವ್ಯುತ್ಪತ್ತಿ ಮತ್ತು ಅಭ್ಯಾಸಗಳು ಪ್ರತಿಭಾ ಸಂಸ್ಕಾರಕಾರಕಗಳು-ಎಂದಿದ್ದಾನೆ.

ಕನ್ನಡ ಅಲಂಕಾರ ಗ್ರಂಥಗಳಾದ ಕವಿರಾಜಮಾರ್ಗ ಮತ್ತು ಕಾವ್ಯಾವಲೋಕನಗಳೂ ಪ್ರತಿಭೆ, ಅಭ್ಯಾಸ, ವಿದ್ವತ್‍ಸೇವೆ, ಕಾವ್ಯಪರಿಚಯಗಳು ಕವಿತೆಗೆ ಕಾರಣಗಳೆಂದು ಹೇಳುತ್ತವೆ.

ಸಂಸ್ಕøತದ ಇತರ ಅಲಂಕಾರಿಕರಾದ ವಾಮನ, ವಾಗ್ಭಟ, ರಾಜಶೇಖರ, ಜಗನ್ನಾಥ ಪಂಡಿತ-ಇವರು ಪ್ರತಿಭೆಯೊಂದೇ ಕಾವ್ಯಹೇತುವೆನ್ನುತ್ತಾರೆ.

ಮುಖ್ಯವಾಗಿ ಕವಿಸಹಜವಾದ ಪ್ರತಿಭೆಯೇ ಕಾವ್ಯಹೇತುವೆನಿಸಿದರೂ ಅಷ್ಟೇ ಸಾಲದು. ಲೋಕನುಭವ, ವಿದ್ಯಾರ್ಜನೆ, ವ್ಯುತ್ವತ್ತಿ (ಬಗೆಬಗೆಯ ಶಾಸ್ತ್ರಗಳು, ಕಲೆಗಳು, ವಿದ್ಯೆಗಳು ಇವುಗಳ ಪರಿಚಯ) ಇವೂ ಬೇಕು. ವ್ಯಾಕರಣ, ಕೋಶ, ಛಂದಶ್ಯಾಸ್ತ್ರಗಳಲ್ಲಿ ಪಾಂಡಿತ್ಯ, ಪೂರ್ವಕವಿಗಳ ಸಂಪ್ರದಾಯ ಪರಿಚಯ ಮತ್ತು ಕಾವ್ಯ ಕಲೆಯ ಅಭ್ಯಾಸವೂ ಇದರೊಡನೆ ಸೇರಿ ಕವಿಪ್ರತಿಭೆ ಸಂಸ್ಕಾರ ಹೊಂದಿ ನಿಶಿತವಾಗಬೇಕು.

ಕವಿ ಎನ್ನುವ ಮಾತಿಗೆ ಪಂಡಿತ ಎಂಬ ಅರ್ಥವೂ ಇದೆ. ಕಾವ್ಯ ಕಲೆಗಳಲ್ಲೊಂದು ಎಂದೂ ಹೆಸರಾಗಿದೆ. ಆದ್ದರಿಂದ ಕಲೋಪಾಸಕನಿಗೆ ಹೇಗೋ ಹಾಗೆ ಕವಿಗೂ ತನ್ನ ಕಲೆಯಲ್ಲಿ ಪಾಂಡಿತ್ಯ, ಅಭ್ಯಾಸಗಳು ಇರಬೇಕಾದುದು ಸಹಜವೇ. ಆದರೆ ಕೇವಲ ಪಾಂಡಿತ್ಯ, ಅಭ್ಯಾಸಗಳಿಂದಲೇ ಉತ್ತಮ ಕಲೆ ಸೃಷ್ಟಿಯಾಗದು. ಅದಕ್ಕೆ ಪ್ರತಿಭೆಯ ಸಹಾಯ ಬೇಕೇ ಬೇಕು. 

     

(ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ